ಮ್ಯಾನ್ಸ್‍ಫೀಲ್ಡ್, ಕ್ಯಾತರಿನ್
1888 - 1923. ಬ್ರಿಟಿಷ್ ಸಣ್ಣ ಕಥೆಗಾರ್ತಿ, ವಿಮರ್ಶಕಿ. ಈಕೆಯ ನಿಜವಾದ ಹೆಸರು ಕ್ಯಾಥ್ಲೀನ್ ಬೋಷಾಂಪ್. 1888 ಅಕ್ಟೋಬರ್ 14 ರಂದು ನ್ಯೂಜಿóಲೆಂಡಿನ ವೆಲ್ಲಿಂಗ್ಟನ್‍ನಲ್ಲಿ ಹುಟ್ಟಿದಳು. ತಂದೆ ಸರ್ ಹೆರಾಲ್ಡ್ ಬೋಷಾಂಪ್ ಕೈಗಾರಿಕೋದ್ಯಮಿಯಾಗಿದ್ದು ಲೇವಾದೇವಿ ವ್ಯವಹಾರ ಮಾಡುತ್ತಿದ್ದ. ತಾಯಿ ಆ್ಯನಿ ಬರ್ನೆಲ್ ಡಯರ್.
ವೆಲ್ಲಿಂಗ್ಟನ್ ಬಳಿಯ ಕರೋರಿ ಎಂಬ ಸಣ್ಣ ಹಳ್ಳಿಯಲ್ಲಿ ಕ್ಯಾತರಿನ್ ಬಾಲ್ಯವನ್ನು ಕಳೆದಳು. ಸ್ಥಳೀಯ ಶಾಲೆಯಲ್ಲಿ ಸಾಧಾರಣ ವಿದ್ಯಾಭ್ಯಾಸವಾಯಿತು. ಚಿಕ್ಕಂದಿನಿಂದ ಕಥೆ, ಸಾಹಿತ್ಯಗಳಲ್ಲಿ ಒಲವಿದ್ದ ಈಕೆ 9ನೆಯ ವಯಸ್ಸಿನಲ್ಲೇ ಬರೆದ ಕಥೆ ಮಾಸಿಕವೊಂದರಲ್ಲಿ ಪ್ರಕಟವಾಯಿತು. 15ನೆಯ ವಯಸ್ಸಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಹೋದಳು (1903). ಲಂಡನ್‍ನ ಹಾರ್ಲಿಸ್ಟ್ರೀಟ್‍ನಲ್ಲಿದ್ದ ಕ್ವೀನ್ಸ್ ಕಾಲೇಜು ಸೇರಿದಳು. ಕೆಲಕಾಲ ಕಾಲೇಜು ಪತ್ರಿಕೆಯ ಸಂಪಾದಕಿಯಾಗಿದ್ದಳು. ಲಂಡನ್ನಿನಲ್ಲಿರುವ ತನಕ ಈಕೆಗೆ ಸಾಹಿತ್ಯಕ್ಕಿಂತ ಸಂಗೀತ ಹೆಚ್ಚು ಆಕರ್ಷಿಸಿತು. ಸಂಗೀತಾಭ್ಯಾಸದಲ್ಲಿ ತೊಡಗಿ ವಯೋಲಿನೊಸೆಲ್ಲೊ ವಾದ್ಯ ನುಡಿಸುವುದರಲ್ಲಿ ಪ್ರವೀಣಳಾದಳು. 1906ರಲ್ಲಿ ಇಷ್ಟವಿಲ್ಲದಿದ್ದರೂ ನ್ಯೂಜಿóಲೆಂಡಿಗೆ ಹಿಂತಿರುಗಬೇಕಾಯಿತು. ಖರ್ಚಿಗೆ ವರ್ಷಕ್ಕೆ ನೂರು ಪೌಂಡ್ ಹಣವನ್ನು ಕಳಿಸಿದರೂ ಸಾಕು ಎಂದು ಹೇಳಿ ತಂದೆಯನ್ನೊಪ್ಪಿಸಿ ಮತ್ತೆ ಇಂಗ್ಲೆಂಡಿಗೆ ಬಂದಳು. ಅತ್ಯಂತ ಸರಳವಾದ, ಕಾರ್ಪಣ್ಯದ ಜೀವನವನ್ನು ನಡೆಸುತ್ತ ಸಂಗೀತವನ್ನು ಬದಿಗಿರಿಸಿ ಸಾಹಿತ್ಯರಚನೆಗೆ ಗಮನಕೊಟ್ಟóಳು. 1909ರಲ್ಲಿ ಜಾರ್ಜ್ ಬೌಡೆನ್ ಎಂಬಾತನನ್ನು ವಿವಾಹವಾದಳು. ಆದರೆ ಈ ದಾಂಪತ್ಯ ಕೆಲವೇ ದಿವಸಗಳಲ್ಲಿ ಮುರಿದು ಬಿತ್ತು.

ಸಂಗೀತನಾಟಕ ತಂಡವೊಂದರ ಜೊತೆ ಯುರೋಪ್ ಪ್ರವಾಸ ಕೈಕೊಂಡಾಗ ಮೊದಲೇ ನಾಜೂಕು ಪ್ರಕೃತಿಯ ಈಕೆ ತೀವ್ರ ಅಸ್ವಸ್ಥಳಾಗಿ ಬವೇರಿಯದ ವೋರಿ ಷೋಪೆನ್ ಎಂಬ ಏಕಾಂತಸ್ಥಳದ ಆರೋಗ್ಯಧಾಮದಲ್ಲಿದ್ದು ಗುಣಮುಖಳಾದಳು. ಇನ್ ಎ ಜರ್ಮನ್ ಪೆನ್ಷನ್ (1911) ಎಂಬ ಕಥಾಸಂಕಲನದ ಕಥೆಗಳಿಗೆ ಇಲ್ಲಿಯ ಅನುಭವಗಳೇ ವಸ್ತು. ಪುಸ್ತಕ ರೂಪದಲ್ಲಿ ಪ್ರಕಟವಾಗುವ ಮುನ್ನ ಈ ಕಥೆಗಳು ದಿ ನ್ಯೂಜ್ ಎಂಬ ಪತ್ರಿಕೆಯಲ್ಲಿ ಎಂಬ ಪ್ರಕಟವಾಗಿದ್ದವು. ಇದೇ ಅವಧಿಯಲ್ಲಿ ಈಕೆ ವೆಸ್ಟ್‍ಮಿನ್‍ಸ್ಟರ್ ಗೆಜೆಟ್‍ನಲ್ಲಿ ಪುಸ್ತಕಾವಲೋಕನ ಮಾಡುತ್ತಿದ್ದಳು. ರಿದಮ್ ಎಂಬ ಸಾಹಿತ್ಯಾವಲೋಕನ ಪತ್ರಿಕೆಯನ್ನು ನಡೆಸುವುದರಲ್ಲಿ ಜಾನ್ ಮಿಡ್ಲ್‍ಟನ್ ಮರ್ರೆ ಎಂಬ ಸಾಹಿತ್ಯ ವಿಮರ್ಶಕನ ಪರಸ್ಪರ ಪ್ರೇಮಕ್ಕೆ ತಿರುಗಿ 1918ರಲ್ಲಿ ಇಬ್ಬರೂ ವಿವಾಹವಾದರು. ಇದೇ ವರ್ಷ ಈಕೆಯ ಇನ್ನೊಂದು ಕಥಾಸಂಕಲನ ಪ್ರಿಲ್ಯೂಡ್ ಪ್ರಕಟವಾಯಿತು. ಮರ್ರೆಯು ವಿಮರ್ಶೆಗೆ ಮೀಸಲಾದ ಅಥೆನಿಯಮ್ ಎಂಬ ಪತ್ರಿಕೆಯ ಸಂಪಾದಕನಾಗಿದ್ದಾಗ ಈಕೆ ಲೇಖನಗಳನ್ನು ಬರೆದು ಕೊಡುತ್ತಿದ್ದಳು. ವಿಮರ್ಶೆಯಲ್ಲೂ ಈಕೆಯ ಪ್ರತಿಭೆ ವ್ಯಕ್ತವಾಯಿತು.

ಬ್ಲಿಸ್ (1920) ಎಂಬ ಕಥಾ ಸಂಕಲನದಿಂದ ಈಕೆ ಪ್ರತಿಭಾವಂತ ಶ್ರೇಷ್ಠ ಕಥೆಗಾರ್ತಿ ಎಂಬ ಖ್ಯಾತಿ ಪಡೆದಳು. 1922ರಲ್ಲಿ ದಿ ಗಾರ್ಡನ್ ಪಾರ್ಟಿ ಎಂಬ ಸಂಕಲನ ಬಂದಿತು. ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿ ಬರೆವ ಕಥೆಗಳಿವೆಯೆಂದು ಲೇಖಕಿಯೇ ಹೇಳಿಕೊಂಡಿದ್ದಾಳೆ. ಬರೆದುದು ಸ್ವಲ್ಪವೇ ಆದರೂ ಕಥಾಸಾಹಿತ್ಯದಲ್ಲಿ ಶ್ರೇಷ್ಠರ ಸಾಲಿನಲ್ಲಿ ಈಕೆ ನಿಲ್ಲುತ್ತಾಳೆ. 

ದೀರ್ಘಕಾಲ ಕ್ಷಯದಿಂದ ನರಳಿದ ಈಕೆ 1923 ಜನವರಿ 9 ರಂದು ನಿಧನಳಾದಳು. ಅದೇ ವರ್ಷ ಮರಣಾನಂತರದ ಪ್ರಕಟನೆಯಾಗಿ ದಿ ಡೋವ್ಸ್ ನೆಸ್ಟ್ ಹೊರಬಂತು. 1909ರಲ್ಲಿ ಬರೆಯಲಾರಂಭಿಸಿ ಸುಮಾರು 1917ರ ವೇಳೆಗೆ ಪೂರ್ಣಗೊಂಡ ಸಮ್‍ತಿಂಗ್ ಚೈಲ್ಡಿಷ್ ಎಂಬ ಕೃತಿ 1924ರಲ್ಲಿ ಪ್ರಕಟವಾಯಿತು. 1914-33ರ ಅವಧಿಯಲ್ಲಿ ಈಕೆ ಬರೆದ ಜರ್ನಲ್ ಆಫ್ ಕ್ಯಾತರಿನ್ ಮ್ಯಾನ್‍ಫೀಲ್ಡ್ ಎಂಬ ಆತ್ಮಕಥೆ 1927ರಲ್ಲೂ ಎರಡು ಸಂಪುಟಗಳಲ್ಲಿ ಸಂಕಲಿಸಿದ ಈಕೆಯ ಸಮಗ್ರ ಪತ್ರಗಳು 1928ರಲ್ಲೂ ಪ್ರಕಟವಾದವು. ಇವುಗಳನ್ನೆಲ್ಲ ವಿಡ್ಲ್‍ಟನ್ ಮರ್ರೆಯೇ ಸಂಪಾದಿಸಿ ಪ್ರಕಟಿಸಿದ.
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ